ಬುಧವಾರ, ಜನವರಿ 27, 2021
ಗುರುವಾರ, ನವೆಂಬರ್ 19, 2020
"ಚಂದಾನಾss.... ಮುನಿಯಾ?"
*ನಿಜವಾಗಿಯೂ ಅವರು ಕುಡಿಯುತ್ತಿರಲಿಲ್ಲ !*
ಹೌದು!.
ಜೀವನ್ದೊಳ್ಗೆ ಒಂದು ಹನಿ ಹೆಂಡವನ್ನೂ ಮುಟ್ಟದ,ತಾನು ಓಡಾಡಿದ ದಾರಿಯಲ್ಲಿ ದಿನಾ ಕುಡುಕ ಸಂಸಾರದ ಗಂಡನ ನಡೆ ನುಡಿಗಳನ್ನು ಸೂಕ್ಷ್ಮವಾಗಿ ಗಮನಿಸಿ ತನ್ನನ್ನೇ ಕುಡುಕ ರತ್ನನನ್ನಾಗಿಸಿಕೊಂಡು ಮುನಿಯಣ್ಣನನ್ನು ಜಡ್ಡು ಸಮಾಜದ ಬಡ್ದು ಪ್ರತಿರೂಪವಾಗಿ ಬಿಂಬಿಸಿ ಹೆಂಡದ್ ಪದ ದೊಳಗೆ ಜೀವಾನಾರ್ಥ-ಪಾರಮಾರ್ಥ ಹರಿಸಿದೋರು ಜಿ.ಪಿ.ರಾಜರತ್ನಂ. ಬದುಕಿದ್ದರೆ ಇಂದಿಗೆ (೫-೧೨-೧೯೦೯) ಬರೋಬ್ಬರಿ ೧೧೩ ರ ಶತಮಾನದ ಬದುಕು ಅವರದಾಗುತ್ತಿತ್ತು!.
ಬಣ್ಣದ ತಗಡಿನ ತುತ್ತೂರಿ , ನಾಯಿ ಮರಿ ನಾಯಿಮರಿ ತಿಂಡಿ ಬೇಕೆ? ಇಂತಹ ಪ್ರಸಿದ್ಧ ಬಾಲ ಪದ್ಯಗಳನ್ನು ತನ್ನ ತಂದೆಯವರ ಅಣತಿಯಂತೆ ಮಕ್ಕಳೆದುರು ಹಾಡಿ ಅವರು ಅದನ್ನು ಸಂತೋಷವಾಗಿ ಮನಸಾರೆ ಆಸ್ವಾದಿಸುತ್ತಾರೆ ಅನ್ನೋದು ನಿಖರವಾದ ಮೇಲೆಯೇ ಅಚ್ಚುಹಾಕಿಸಿ , ತಲೆ ಮೇಲೆ ಹೊತ್ತು ಪುಸ್ತಕ ಮಾರಿ ಜೀವನ ಮಾಡಿದ ಮಗು ಮನಸ್ಸಿನ ಮುದ್ದುಕವಿ ಜಿ.ಪಿ.!
ಗುಂಡು ಮುಟ್ಟದ ಗುಂಡ್ಲುಪೇಟೆಯ ಈ ಶರೀಫ ಗುಂಡು ಪಂಡಿತ (ಜಿ.ಪಿ.) ರಾಜರತ್ನಂ ಆಗಿ ಪ್ರಸಿದ್ಧಿಯಾದದ್ದು ಅವರು ಹೆಂಡದ ಪದದೊಳಗೆ ಆಳಕ್ಕೆ ಇಳಿದು ಸಿದ್ದಿಸಿದ ಸಿದ್ದಿಗೆ ಸಿಕ್ಕ ಪುರಸ್ಕಾರ!!.
ಪ್ರಸ್ತುತ ಹಾಡಿನಲ್ಲಿಯೂ ಅವರು ಇದನ್ನೇ ಮಾಡುತ್ತಾರೆ
ಸಮಾಜದ ಜಿಪುಣ ಜನಾಂಗದ ಪ್ರತಿನಿಧಿ ಮುನಿಯಣ್ಣನ ತಾನೂ ತಿನ್ನದೆ ಬೇರೆಯವರಿಗೂ ಕೊಡದೆ ಕಾಸು ಕೂಡಿಡುವ ವಿಷಗುಣವನ್ನು "ಚಂದಾನಾss.... ಮುನಿಯಾ?" ಅಂದು ನಯವಾಗಿ ದೈನ್ಯ ಧ್ವನಿಯಲ್ಲಿ ಲೇವಡಿ ಮಾಡುತ್ತಾ ನಮ್ಮ- ನಿಮ್ಮೆಲ್ಲರ ಆತ್ಮಸಾಕ್ಷಿಯನ್ನೆ ಪ್ರಶ್ನಿಸುವ ರೀತಿಯಂತೂ ಅನನ್ಯ !
''ದುಡ್ಡೇ ದೊಡ್ಡಪ್ಪ'' ಅನ್ನೋ ವಿಕೃತ ಮನಸ್ಥಿತಿಯನ್ನು ಕಟುವಾಗಿ ಕುಟುಕುವ ರಾಜರತ್ನಮ್ ಅಸ್ಥಿರ ಬದುಕಿನ ಕ್ಷಣ ಜೀವನವನ್ನು ''ಸಾಸ್ವತವೇ ನೀನು, ಬುಟ್ಟಿಗ್ ಬಿದ್ ಮೀನು!!'' ಅನ್ನೋ ಉಪಮೆಯ ಮೂಲಕ ಉಸಿರುಗಟ್ಟಿಸುವಂತೆ ಕೇಳುತ್ತಾರೆ .
ಮುಂದಕ್ಕೆ ಹಾಡ್ತಾ ನಮ್ಮ ಇಂದಿನ ಅರ್ಥಾಶಯದ ಧಾವಂತದ ದಾಂಗುಡಿಯನ್ನು
ಸುಮ್ ಸುಮ್ಕೆ
ಒದ್ದಾಡ್ತಿ
ಮೂರ್ ಹೊತ್ತ್
ದುಡ್ ಮಾಡ್ತಿ
ಅನ್ಬೋಸದೇ ಸಾಯ್ತಿ
ನಿನ್ಗೇನಕಿ ಪಾಯ್ತಿ
ಅನ್ನೋ ಸಣ್ಣ ಸಣ್ಣ ಹಳ್ಳಿ ಮಣ್ಣಿನ ಪದಗಳಲ್ಲಿ '' ಕಟ್ಟಿಟ್ಟದ್ದನ್ನು ಬಿಟ್ಟು ಹೋಗುವ'' ಪರಿ ವರ್ಣಿಸುವ ಸೊಬಗು ಅದು ರಾಜರತ್ನಂ ಅವರಿಗೆ ಮಾತ್ರ ಸಾಧ್ಯವೇನೋ?
''ಸತ್ತ್ ಮೇಲೆ ಶೂನ್ಯ'' , ಇದ್ದಷ್ಟು ದಿನ ಒಂದಿಷ್ಟಾದರೂ ದಾನದ ಬದುಕಿಂದ ಮಾನವನಾಗು ಅನ್ನುವುದನ್ನು ''ಹೆಂಡ ಕೊಡು'' ಎಂದು ಅಂಗಲಾಚಿ ಮದಿರೆಯೊಳಗೂ ದಯೆ-ದಾನದ ಜಗಮಾನ್ಯದ ಬದುಕನ್ನು ಸೂಚ್ಯವಾಗಿ ಎತ್ತಿಡುತ್ತಾರೆ!!.
ಸಾಮಾನ್ಯನ ಬದುಕಿನ ಪಾಡನ್ನು ಹಾಡಿನ ಮೂಲಕ ಜನದೊಳಗೆ-ಮನದೊಳಗೆ ಹೆಂಡದ ರೂಪದಲ್ಲಿ ಸರಾಗವಾಗಿ ಹರಿಯಬಿಡುವ ಜಿ.ಪಿ.ಆರ್. ಸಾಹಿತ್ಯವನ್ನು ಮೈಸೂರು ಅನಂತ ಸ್ವಾಮಿ ಶ್ರಾವ್ಯವಾಗಿ ಹಾಡುತ್ತಾರೆ
ಕಾಂಚಾಣದ ಅಮಲಿನೊಳಗಿಂದ ಹೊರಬಂದು ಮತ್ತೊಮ್ಮ ಈ ಹಾಡನ್ನು ಕೇಳಿದರೆ ಗುಂಡು ಪಂಡಿತನಿಗೆ ಅದುವೇ ಒಂದು ಉದ್ದಂಡ !
ಕುಡುಕನಾದರೂ ಸಮಾಜದ ಕೆಡುಕ ತಿದ್ದುವ ಈ ರತ್ನ ಅಷ್ಟಕ್ಕೇ....ಆಪ್ತನಾಗುತ್ತಾನೆ ....ಇಷ್ಟಿಷ್ಟೇ ಆತ್ಮೀಯನಾಗುತ್ತಾನೆ !!.
ಕುಡುಕ ರತ್ನನ ಮೂಲಕ ಹೆಂಡದ ಬುಂಡೆಯೊಳಗೆ ಜೀವನಾರ್ಥ ಹರಿಯಬಿಟ್ಟ ಗುಂಡ್ಲು ಪೇಟೆಯ ಈ ಗುಂಡು ಪಂಡಿತನ ಇವತ್ತಾದ್ರೂ ಒಂದಿಷ್ಟು ಹೊತ್ತು ನೆನೆದರೆ ನಮ್ಮೊಳಗಿನ ಕನ್ನಡತನಕ್ಕೊಂದಿಷ್ಟು ತಂಪಾದೀತು !.
ಶಾಂತಾರಾಮ್ ಶೆಟ್ಟಿ
ಬುಧವಾರ, ಜುಲೈ 11, 2018
ಮನೆಯೊಡತಿ!
==========°°°
ಪ್ರಿಯೇ ...
ನೀನೇ ನನ್ನ ಮನೆಯೊಡತಿ
ಅಂದಿದ್ದು ಸುಳ್ಳಲ್ಲ !
ಆದರೆ
ಮನೆ ಓನರೇಕೋ ಒಪ್ಪುತ್ತಿಲ್ಲ !!
ಶಾಂತಾರಾಮ್ ಶೆಟ್ಟಿ
°°°°°°°°°°°°°°°••••
(ಬಾಡಿಗೆ ಮನೆಯ ಬಡವನ ಶ್ರೀಮಂತ ಪ್ರೀತಿ!!)😀
ಎಲ್ಲಿ?!
=≠======°°°
ಕತ್ತಲೆಯನ್ನು
ಕತ್ತಲೆಯಲ್ಲೇ
ಹುಡುಕಬೇಕು....!
ಬುದ್ಧಿವಂತರು
ಬೆಳಕು
ಚೆಲ್ಲಿ
ಅಲ್ಲಿ-ಇಲ್ಲಿ
ಹುಡುಕುತ್ತಾರೆ!!.
✍🏻ಶಾಂತಾರಾಮ್ ಶೆಟ್ಟಿ.
============⚫
ಬಣ್ಣದ ಬದುಕು!
========°°°°°°🌈
ಆ
ಸಿನಿಮಾ
ಕಲಾವಿದನದ್ದು
ಇದು
ಐದನೇ ಮದುವೆ!
ಆಹಾ....
ಬಣ್ಣದ
ಬದುಕೆಂದರೆ
ಬಹುಶ: ಇದುವೇ!!
✍🏻 ಶಾಂತಾರಾಮ್ ಶೆಟ್ಟಿ
ಅಮ್ಮನ ವಿಚಿತ್ರ ಚಿತ್ರ!
========°°°°°°°°°°°
ಅಮ್ಮ
ಬಟ್ಟೆ ಒಗೆಯುವಾಗೆಲ್ಲಾ
ಅಪ್ಪನ ಜೇಬು
ತಡಕಾಡುತ್ತಿದ್ದಳು
ಹಣದಾಸೆಗೆ ಅಲ್ಲ...
ಅಪ್ಪನ ಸಂಪಾದನೆ
ನೀರು ಪಾಲಾಗದಿರಲಿ ಎಂದು!
ಮನೆ ಕಟ್ಟದಿರುವ ಬಗ್ಗೆ
ಚರ್ಚೆ ಯಾದಾಗಲೆಲ್ಲಾ
ಅಮ್ಮನ ಅಡುಗೆ ಆವತ್ತು
ತುಂಬಾ ಖಾರ....
ಕೋಪವಲ್ಲ,
ತನ್ನ ಹೊಟ್ಟೆಯುರಿ
ಅಪ್ಪನಿಗೂ ಅರ್ಥವಾಗಲೆಂದು!
ಅದು ಮಾಡಿಲ್ಲ ಇದು ಮಾಡಿಲ್ಲ
ಅನ್ನುವ ಅವಳ
ಅಸಂತೃಪ್ತಿಯಲ್ಲ
ಅಪ್ಪ
ಬೇಗ ಉದ್ದಾರವಾಗಿ
ಇನ್ನಷ್ಟು
ಎತ್ತರೆತ್ತರ ಏರಲೆಂದು!
ಒಗೆದು ಇಸ್ತ್ರಿ ಹಾಕಿ
ಮಡಚಿಡುವ
ಅಪ್ಪನ ಅಂಗಿಯ ಜೇಬಲ್ಲಿ
ಪಂಚೆಯ ಮಡಿಕೆಗಳಲ್ಲಿ
ಅಮ್ಮನ ಕನಸುಗಳೂ
ಬೆಚ್ಚಗೆ ಅಡಗಿರುತ್ತವೆ!
ಅವಳ ವಿಚಿತ್ರ ಬೈಗುಳಗಳು
ಅಪ್ಪನಿಗಾಗಿ ಅಲ್ಲ
ಅದು ಅವಳು
ಹೆಗಲುಕೊಡಲು
ಪಣ ತೊಟ್ಟ
ಅಪ್ಪನೊಂದಿಗ ಅವಳ ಸಂಸಾರಕ್ಕಾಗಿ!!
ಅಮ್ಮ
ಕೆಲವೊಮ್ಮೆ ಸ್ವಲ್ಪ ವಿಚಿತ್ರ
ಅದರೂ ಅವಳ ಕಣ್ಣಲ್ಲಿಕಾಣುವುದು
ಬರೇ ಅಸ್ಪಷ್ಟ ಕನಸುಗಳಲ್ಲ
ಬದುಕಿ
ನೇರ ದೂರ ತೀರಾ ಸ್ಪಷ್ಟ ಚಿತ್ರ!!
✍🏻ಶಾಂತಾರಾಮ್ ಶೆಟ್ಟಿ
〰〰〰〰〰〰