ಬುಧವಾರ, ಜುಲೈ 11, 2018

ಅಮ್ಮನ ವಿಚಿತ್ರ ಚಿತ್ರ!

ಅಮ್ಮನ ವಿಚಿತ್ರ ಚಿತ್ರ!
========°°°°°°°°°°°


ಅಮ್ಮ
ಬಟ್ಟೆ ಒಗೆಯುವಾಗೆಲ್ಲಾ
ಅಪ್ಪನ ಜೇಬು
ತಡಕಾಡುತ್ತಿದ್ದಳು
ಹಣದಾಸೆಗೆ ಅಲ್ಲ...
ಅಪ್ಪನ ಸಂಪಾದನೆ
ನೀರು ಪಾಲಾಗದಿರಲಿ ಎಂದು!

ಮನೆ ಕಟ್ಟದಿರುವ ಬಗ್ಗೆ‌
ಚರ್ಚೆ ಯಾದಾಗಲೆಲ್ಲಾ
ಅಮ್ಮನ ಅಡುಗೆ ಆವತ್ತು
ತುಂಬಾ ಖಾರ....
ಕೋಪವಲ್ಲ,
ತನ್ನ ಹೊಟ್ಟೆಯುರಿ 
ಅಪ್ಪನಿಗೂ  ಅರ್ಥವಾಗಲೆಂದು!

ಅದು ಮಾಡಿಲ್ಲ ಇದು ಮಾಡಿಲ್ಲ
ಅನ್ನುವ ಅವಳ  
ದಿನದ ಬೈಗುಳದಲ್ಲಿ
ಅಸಂತೃಪ್ತಿಯಲ್ಲ
ಅಪ್ಪ
ಬೇಗ ಉದ್ದಾರವಾಗಿ
ಇನ್ನಷ್ಟು
ಎತ್ತರೆತ್ತರ ಏರಲೆಂದು!


ಒಗೆದು ಇಸ್ತ್ರಿ ಹಾಕಿ
ಮಡಚಿಡುವ
ಅಪ್ಪನ ಅಂಗಿಯ ಜೇಬಲ್ಲಿ
ಪಂಚೆಯ ಮಡಿಕೆಗಳಲ್ಲಿ
ಅಮ್ಮನ ಕನಸುಗಳೂ
ಬೆಚ್ಚಗೆ ಅಡಗಿರುತ್ತವೆ!

ಅವಳ ವಿಚಿತ್ರ ಬೈಗುಳಗಳು
ಅಪ್ಪನಿಗಾಗಿ ಅಲ್ಲ
ಅದು ಅವಳು
ಹೆಗಲುಕೊಡಲು
ಪಣ ತೊಟ್ಟ
ಅಪ್ಪನೊಂದಿಗ ಅವಳ  ಸಂಸಾರಕ್ಕಾಗಿ!!

ಅಮ್ಮ
ಕೆಲವೊಮ್ಮೆ ಸ್ವಲ್ಪ ವಿಚಿತ್ರ
ಅದರೂ ಅವಳ ಕಣ್ಣಲ್ಲಿಕಾಣುವುದು
ಬರೇ ಅಸ್ಪಷ್ಟ ಕನಸುಗಳಲ್ಲ
ಬದುಕಿ
ನೇರ ದೂರ ತೀರಾ  ಸ್ಪಷ್ಟ ಚಿತ್ರ!!

✍🏻ಶಾಂತಾರಾಮ್ ಶೆಟ್ಟಿ
〰〰〰〰〰〰

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ